ಎಕ್ಲೀಸಿóಯ
ಪ್ರಾಚೀನ ಗ್ರೀಕ್ ನಗರರಾಜ್ಯವೊಂದರ ನಾಗರಿಕರ ಸಭೆ. ಮೂಲತಃ ಗ್ರೀಕ್ ಭಾಷೆಯಲ್ಲಿ ಈ ಶಬ್ದಕ್ಕೆ ಆಹ್ವಾನಿತರ ಸಭೆ ಎಂಬ ಅರ್ಥವಿತ್ತು. ಸಾಮಾನ್ಯವಾಗಿ ಎಲ್ಲ ಗ್ರೀಕ್ ನಗರ ರಾಜ್ಯಗಳಲ್ಲೂ ಈ ಬಗೆಯ ಸಭೆಗಳಿದ್ದುವಾದರೂ ಇವುಗಳ ರಚನೆ ಹಾಗೂ ಅಧಿಕಾರಗಳಲ್ಲಿ ಭಿನ್ನತೆಗಳಿದ್ದುವು. ಕಾಲದಿಂದ ಕಾಲಕ್ಕೆ ಇವು ವ್ಯತ್ಯಾಸ ಹೊಂದುತ್ತಿದ್ದುವು. ಇದು ಪರಿಪುಷ್ಟವಾಗಿ ಬೆಳೆದು ಫಲಿಸಿದ್ದು ಅಥೆನ್ಸಿನಲ್ಲಿ.

ಕ್ರಿ.ಪೂ. 632ರಲ್ಲಿ ಮೊಟ್ಟಮೊದಲಿಗೆ ಅಥೆನ್ಸ್ ಜನರ ಸಾಂಘಿಕ ವರ್ತನೆಯ ಆಧಾರಗಳು ಇತಿಹಾಸದಲ್ಲಿ ದೊರಕುತ್ತವೆ. ಅಥೆನ್ಸ್ ನಗರ ಅನೇಕ ರೀತಿಯ ರಾಜಕೀಯ ವ್ಯವಸ್ಥೆಗಳಲ್ಲಿ ಪ್ರಯೋಗ ನಡೆಸಿತ್ತು. ಮೊದಲಿಗೆ ರಾಜಪ್ರಭುತ್ವ ರೂಢಿಯಲ್ಲಿದ್ದು ಅನಂತರ ಶ್ರೀಮಂತ ಪ್ರಭುತ್ವ ಆಚರಣೆಗೆ ಬಂತು. ಇದರಲ್ಲಿ ಒಂಬತ್ತು ಅಧಿಕಾರಿಗಳ (ಆರ್ಕನ್ಸ್) ಮಂಡಲಿ ಆರಿಯಾಪಗಸ್ ಎಂಬ ಶ್ರೀಮಂತ ಸಭೆಯೂ ಜೊತೆಗೆ ಈ ಸಾಮಾನ್ಯ ಸಭೆಯೂ ಇದ್ದುವು. ಕ್ರಿ.ಪೂ. 594ರಲ್ಲಿ ಸೋಲನ್ ಎಂಬ ಮಹಾನಾಯಕ ಅಥೆನ್ಸಿನಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಿ, ಹಲವಾರು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಜಾರಿಗೆ ತಂದದ್ದರಿಂದ ಎಕ್ಲೀಸಿóಯದ ಕಾರ್ಯಕ್ಷೇತ್ರ ವಿಸ್ತಾರವಾಯಿತು. ಅದುವರೆಗೂ ಎಕ್ಲೀಸಿóಯಕ್ಕೆ ಹೆಚ್ಚಿನ ಅಧಿಕಾರ ಇರಲಿಲ್ಲ. ಯಾರು ಬೇಕಾದರೂ ಇದರ ಸದಸ್ಯತ್ವ ಪಡೆಯುವುದು ಸಾಧ್ಯವಾಗುವಂತೆ ಸೋಲನ್ ನಿಯಮ ರಚಿಸಿದ್ದ. ಇದು ಅಧಿಕಾರಿಗಳನ್ನು ಚುನಾಯಿಸುವ ಮಂಡಳಿಯಾಗಿದ್ದುದಲ್ಲದೆ ನ್ಯಾಯಾಲಯವೂ ಆಗಿತ್ತು. ನ್ಯಾಯಾಲಯದ ರೂಪು ಪಡೆದಾಗ ಹೆಲಿಯ ಎಂದು ಇದರ ಹೆಸರು. ಆಡಳಿತಯಂತ್ರ ಜನಸಾಮಾನ್ಯರ ಹಿಡಿತದಲ್ಲೇ ಉಳಿಯುವಂತೆ ಮಾಡಲು ಇದು ಸಹಾಯಕವಾಗಿತ್ತಲ್ಲದೆ ಪ್ರಜಾಪ್ರಭುತ್ವದಲ್ಲಿ ಇದರ ಸ್ಥಾನ ಉನ್ನತವಾಗಿತ್ತು.			     
(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ